ಕರಾಚಿ : ಪಶ್ಚಿಮ ಪಾಕಿಸ್ತಾನದ ಮುಖ್ಯ ರೇವುಪಟ್ಟಣ. ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ. ಇದು ಸಿಂಧ್ ಪ್ರಾಂತ್ಯದ ರಾಜಧಾನಿ ಪಾಕಿಸ್ತಾನದ ರಚನೆಯಾದ ಮೇಲೆ ಅದರ ರಾಜಧಾನಿಯಾಗಿತು. ಈಗ ಇದು ಜಿಲ್ಲೆಯ ಮತ್ತು ವಿಭಾಗದ ಮುಖ್ಯಪಟ್ಟಣ. ಜನಸಂಖ್ಯೆ 
20,000,000 (2006). ಹಿಂದೆ ಬ್ರಿಟಿಷರು ಸಿಂಧನ್ನು ಆಕ್ರಮಿಸಿಕೊಳ್ಳುವ (1843) ಮುನ್ನ ಇದು ಅಷ್ಟೇನೂ ಪ್ರಸಿದ್ಧವಾಗಿರಲಿಲ್ಲ. ಅಮೆರಿಕನ್ ಅಂತರ್ಯುದ್ಧದ ಫಲವಾಗಿ ಭಾರತದ ಹತ್ತಿಗೆ ಬೇಡಿಕೆಯುಂಟಾದಾಗ ಈ ನಗರದ ವ್ಯಾಪಾರ ಅಧಿಕಗೊಂಡಿತು. 1878ರಲ್ಲಿ ವಾಯವ್ಯ 
ರೈಲ್ವೆಯ ನಿರ್ಮಾಣವಾದಾಗಿನಿಂದ ಇದರ ಪ್ರಾಮುಖ್ಯ ಅಧಿಕವಾಯಿತು. ಇದರಿಂದಾಗಿ ಅವಿಭಜಿತ ಭಾರತದ ಇಡೀ ಪಂಜಾಬು ಇದರ ಹಿನ್ನಾಡಾಗಿ ಪರಿಣಮಿಸಿತಲ್ಲದೆ ಅಘ್ಘಾನಿಸ್ತಾನದ ವರೆಗಿನ ಪ್ರದೇಶದ ವಿದೇಶೀ ವ್ಯಾಪಾರವೆಲ್ಲ ಇದರ ಮೂಲಕವೇ ಸಾಗುವಂತಾಯಿತು. 

ಇದು ಯುರೋಪಿಗೂ ಈ ಪ್ರದೇಶಕ್ಕೂ ನಡುವೆ ಅತ್ಯಂತ ಹತ್ತಿರದ ಬಂದರು. ಸುಕ್ಕೂರ್ ಜಲಾಶಯದ ನಿರ್ಮಾಣದಿಂದ ನೀರಾವರಿ ಸೌಲಭ್ಯ ಬೆಳೆದು ಸಿಂಧಿನ ಉತ್ಪಾದನೆ ಹೆಚ್ಚಿದಾಗ ಕರಾಚಿಯ ಪ್ರಾಮುಖ್ಯ ಇನ್ನೂ ಹೆಚ್ಚಿತು. ಈಚೆಗೆ ಅಂತಾರಾಷ್ಟ್ರೀಯ ವಿಮಾನ ಮಾರ್ಗದ 
ಮುಖ್ಯಕೇಂದ್ರವಾಗಿದೆ. ಕರಾಚಿ ಬಂದರು ಸಿಂಧೂ ನದೀಮುಖದ ವಾಯವ್ಯದಲ್ಲಿದೆ. ಕರೆಯ ಉದ್ದಕ್ಕೂ ಪಶ್ಚಿಮದಿಂದ ಪುರ್ವಾಭಿಮುಖವಾಗಿ ಕಡಲ ಪ್ರವಾಹವಿರುವುದರಿಂದ ಸಿಂಧೂ ನದಿಯಿಂದ ಬಂದು ಬೀಳುವ ಮಣ್ಣಿನಿಂದ ಈ ಬಂದರಿಗೇನೂ ಅಪಾಯವಿಲ್ಲ. ಉದ್ದನೆಯ 
ಮನೋಹರ ನೆಲದ ಚಾಚು ರೇವಿಗೆ ರಕ್ಷಣೆ ನೀಡಿದೆ. ಕಿಯಮಾರಿ ಎಂಬುದು ಹಿಂದೆ ಇದರೊಳಗಿನ ಒಂದು ದ್ವೀಪವಾಗಿತ್ತು. 1850ರಲ್ಲಿ ಇದಕ್ಕೆ ಸೇತುವೆ ಕಟ್ಟಿ ರೈಲ್ವೆ ಸಂಪರ್ಕ ಏರ್ಪಡಿಸಿದ್ದರಿಂದಲೂ ಇದಕ್ಕೂ ಮುಖ್ಯ ಭೂಭಾಗಕ್ಕೂ ನಡುವಣ ಪ್ರದೇಶವನ್ನು ವಸತಿ 
ಯೋಗ್ಯವಾಗಿ ಪರಿವರ್ತಿಸಿದ್ದರಿಂದಲೂ ಈಗ ಇದು ದ್ವೀಪವಾಗಿ ಉಳಿದಿಲ್ಲ. ಅವಿಭಜಿತ ಭಾರತದ ಸಮುದ್ರಮಾರ್ಗೀಣ ರಫ್ತುವ್ಯಾಪಾರದಲ್ಲಿ ಏಳನೆಯ ಒಂದರಿಂದ ಅರನೆಯ ಒಂದರ ವರೆಗಿನಷ್ಟು ಭಾಗ ಕರಾಚಿಯ ಮೂಲಕ ನಡೆಯುತ್ತಿತ್ತು. ಹತ್ತಿ, ಗೋದಿ, ಅಕ್ಕಿ, ಎಣ್ಣೆಬೀಜ, 
ಉಪ್ಪು ಇವು ನಿರ್ಯಾತಗಳಾಗಿದ್ದುವು. ಆಗ ಇದರ ಮೂಲಕ ಸಾಗಿಬರುತ್ತಿದ್ದ ಪದಾರ್ಥಗಳೆಂದರೆ ಪೆಟ್ರೋಲಿಯಂ, ಜವಳಿ, ಯಂತ್ರ ಮತ್ತು ಕಲ್ಲಿದ್ದಲು. ಆಮದಿಗಿಂತ ರಫ್ತೇ ಹೆಚ್ಚಾಗಿತ್ತು. ಪಾಕಿಸ್ತಾನದ ರಚನೆಯಾದಾಗ ಭಾರತದ ವಾಯವ್ಯ ಭಾಗದ ವಿದೇಶೀ ವ್ಯಾಪಾರದ 
ಹೆಬ್ಬಾಗಿಲಾಗಿದ್ದ ಕರಾಚಿಯೂ ಪಾಕಿಸ್ತಾನಕ್ಕೆ ಸೇರಿತು. ಈ ಪ್ರದೇಶದ ಆವಶ್ಯಕತೆಗಳನ್ನು ಪುರೈಸಲು ಗುಜರಾತಿನಲ್ಲಿ ಕಾಂಡ್ಲ ರೇವುಪಟ್ಟಣವನ್ನು ನಿರ್ಮಿಸಲಾಗಿದೆ (ನೋಡಿ- ಕಾಂಡ್ಲಾ).

1941ರಲ್ಲಿದ್ದಂತೆ ಕರಾಚಿಯ ಜನಸಂಖ್ಯೆಯಲ್ಲಿ ಶೇ. 57ರಷ್ಟು ಮಂದಿ ಮುಸ್ಲಿಮೇತರರಾಗಿದ್ದರು. ಇದು ಪಾಕಿಸ್ತಾನದ ರಾಜಧಾನಿಯಾಯಿತು. 1948ರಲ್ಲಿ ಇದನ್ನೂ ಇದರ ಸುತ್ತಣ ಹಳ್ಳಿಗಳನ್ನೂ ರೇವಿನ ಬಳಿಯ ದ್ವೀಪಗಳನ್ನೂ ಕೇಂದ್ರಶಾಸಿತ ಪ್ರದೇಶವಾಗಿ ಪರಿವರ್ತಿಸಲಾಯಿತು. ಪಾಕಿಸ್ತಾನದ ರಾಜಧಾನಿಯನ್ನು ಕರಾಚಿಯಿಂದ ರಾವಲ್ಪಿಂಡಿಗೆ ವರ್ಗಾಯಿಸಿದ್ದು 1959 ಅಕ್ಟೋಬರಿನಲ್ಲಿ. ಇದು ಪಶ್ಚಿಮ ಪಾಕಿಸ್ತಾನದ ನೌಕಾಪಡೆಯ ಕೇಂದ್ರ.

ಸದರ್ ಬeóÁರ್ ಕರಾಚಿಯ ಮುಖ್ಯ ವ್ಯಾಪಾರ ಕೇಂದ್ರ. ಬಂದರ್ ರಸ್ತೆ. ಮೆಕ್ಲಿಯಾಡ್ ರಸ್ತೆ ಮತ್ತು ಫ್ರಿಯರ್ ರಸ್ತೆಗಳು ಮುಖ್ಯ ವಾಣಿಜ್ಯ ಪ್ರದೇಶಗಳು. ಕರಾಚಿ ವಿಶ್ವವಿದ್ಯಾಲಯವನ್ನು 1950ರಲ್ಲಿ ಸ್ಥಾಪಿಸಲಾಯಿತು. ಉದ್ಯಾನವೊಂದರ ನಡುವೆ ಇರುವ ಫ್ರಿಯರ್ 

ಭವನವೊಂದು ರಾಷ್ಟ್ರೀಯ ವಸ್ತುಸಂಗ್ರಹಾಲಯ. ಬನ್ರ್ಸ್‌ ಉದ್ಯಾನ ಪ್ರಸಿದ್ಧವಾಗಿದೆ. ಅಖಂಡ ಭಾರತದ ವಿಭಜನೆಯಾದ ಮೇಲೆ ಕರಾಚಿ ನಗರದ ಜನಸಂಖ್ಯೆ ಅತಿಯಾಗಿ ಹೆಚ್ಚಿತು. ಇದರ ಬಳಿ ಹಲವು ಉಪನಗರಗಳ ನಿರ್ಮಾಣವಾಗಿವೆ. ಕರಾಚಿ ಅಭಿವೃದ್ಧಿ ಸಂಸ್ಥೆಯ 
ಸ್ಥಾಪನೆಯಾದದ್ದು 1957ರಲ್ಲಿ.

ಕರಾಚಿಯ ಹಡಗು ತಾಣಗಳ (ಬರ್ತ್) ಬಳಿಯ ಸಮುದ್ರದಾಳವನ್ನು ಹೆಚ್ಚಿಸಲೂ ಬಂದರಿನ ಸ್ಥಳ ವಿಸ್ತರಿಸಲೂ 1958ರಲ್ಲಿ ಅಲ್ಲಿಯ ಬಂದರು ನ್ಯಾಸ ಮಂಡಲಿ ವಿಶೇಷ ಕಾರ್ಯ ಕೈಕೊಂಡಿದ್ದರಿಂದ ಈಗ ಅದರ ಸಾಮಥರ್ಯ್‌ ತಕ್ಕಮಟ್ಟಿಗೆ ಅಧಿಕಗೊಂಡಿದೆ.
ಕರಾಚಿಯ ಕೈಗಾರಿಕಾ ಪ್ರದೇಶ ಪುರ್ವದಲ್ಲಿ 21 ಕಿಮೀ ಗಳವರೆಗೂ ಹಬ್ಬಿದೆ. ಹತ್ತಿ, ರೇಷ್ಮೆ ಮತ್ತು ಉಣ್ಣೆ ಜವಳಿ, ಪ್ಲಾಸ್ಟಿಕ್ ಮತ್ತು ರಸಾಯನ ಪದಾರ್ಥಗಳ ಮತ್ತು ಚರ್ಮದ ವಸ್ತುಗಳ ಕೈಗಾರಿಕೆಗಳು ಮುಖ್ಯವಾದವು.

ಪಶ್ಚಿಮ ಪಾಕಿಸ್ತಾನದ ಮುಖ್ಯ ಸ್ಥಳಗಳಿಗೂ ಕರಾಚಿಗೂ ಪಾಕಿಸ್ತಾನ್ ಪಶ್ಚಿಮ ರೈಲ್ವೆಯ ಸಂಪರ್ಕವಿದೆ. ಇಲ್ಲಿಂದ ಭಾರತದ ರೈಲ್ವೆಯೊಂದಿಗೆ ಗಡಿ ನಗರವಾದ ಮುನಾಬಾದಿನ ಮೂಲಕ ಹಾದು ಸಂಪರ್ಕ ಕಲ್ಪಿಸುವ ರೈಲುಮಾರ್ಗವೊಂದುಂಟು. ಕರಾಚಿ ನಗರ ತೈಲ 
ನೆಲೆಗಳಿಗೆ ಹತ್ತಿರದಲ್ಲಿರುವುದರಿಂದಲೂ ಇಲ್ಲಿ ಪ್ರವಾಹ ಮತ್ತು ಮಳೆ ಮೋಡೆಗಳಿಲ್ಲದಿರುವುದ ರಿಂದಲೂ ಸನ್ನಿವೇಶಮಹಿಮೆಯಿಂದಲೂ ಕರಾಚಿಯ ದ್ರಿಘ್ರೋಡ್ ಮುಖ್ಯ ಅಂತಾರಾಷ್ಟ್ರೀಯ ವಿಮಾನದಾಣವಾಗಿದೆ.	(ಎಸ್.ಎನ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ